ತಾತ: ತುಂಬಾ ಹೊಟ್ಟೆ ಉರೀತಿದೆ ಡಾಕ್ಟ್ರೆ
ಡಾಕ್ಟರ್: ಡೋಂಟ್ ವರಿ, ಮಾತ್ರೆ ಕೊಡ್ತೀನಿ
ತಾತ: ಬೇಡ. ಉಸಿರಾಡಕ್ಕಾಗಲ್ಲ
ಡಾಕ್ಟರ್: ಯಾಕೆ?
ತಾತ: ಕೈ ನಡುಗತ್ತೆ. ಮಾತ್ರೆ ಬಾಯಿಗೆ ಹಾಕ್ಕೊಳಕ್ಕೆ ಹೋಗಿ ಎಷ್ಟೋ ಸರಿ ಮೂಗಿಗೆ ಒಳ್ಳೆ ವೆಡ್ಜ್ ಆದ ಹಾಗೆ ಕೂತ್ಬಿಡತ್ತೆ.
ಡಾಕ್ಟರ್: ಔಷಧಿ ಕೊಡ್ತೀನಿ
ತಾತ: ಬೇಡ. ಹೆಂಡ್ರಿ ಬೈತಾಳೆ
ಡಾಕ್ಟರ್: ಯಾಕೆ ಬೈತಾರೆ?
ಡಾಕ್ಟರ್: ಇಂಜೆಕ್ಷನ್ನು?
ತಾತ: ನೋವಾಗತ್ತೆ. ಒಂದ್ಸರ್ತಿ ಇಂಜೆಕ್ಷನ್ ತೊಗೊಂಡಿದ್ದೆ, ತಕ್ಷಣ ಟೈರ್ ಅಂಗಡೀಗೆ ಹೋದೆ.
ಡಾಕ್ಟರ್: ಯಾಕೆ?
ತಾತ: ಆ ನರ್ಸ್ ಮಾಡಿದ ತೂತಿಗೆ ಪಂಕ್ಷರ್ ಹಾಕಿಸ್ಕೊಳಕ್ಕೆ.
ಡಾಕ್ಟರ್: ಸರೀ, ಹೊಟ್ಟೆ ಉರಿ ಶುರು ಆಗಿದ್ದು ಯಾವಾಗ?
ತಾತ: ಪಕ್ಕದ ಮನೆಯವನು ಹೊಸ ಕಾರ್ ತೊಗೊಂಡಾಗ್ಲಿಂದ!
ಡಾಕ್ಟರ್: ನೀವು ಈ ವಯಸ್ಸಲ್ಲಿ ಈ ತರಹ ಹೊಟ್ಟೆ ಉರ್ಕೋಬಾರ್ದು
ತಾತ: ಹಾಗಾದ್ರೆ ಹೊಟ್ಟೆ ಉರ್ಕೊಳಕ್ಕೆ ಸರಿಯಾದ ವಯಸ್ಸು ಯಾವುದು ಡಾಕ್ಟ್ರೆ?
ಡಾಕ್ಟರ್: ತಾತಾ... ನನ್ನ ಕ್ಲಿನಿಕ್ ಟೈಂ ವೇಸ್ಟ್ ಮಾಡ್ಬೇಡಿ. ನಿಮಗೆ ನಿಜವಾಗಲೂ ಏನಾಗ್ತಿದೆ ಹೇಳಿ
ತಾತ: ವಯಸ್ಸಾಗ್ತಿದೆ ಡಾಕ್ಟ್ರೆ.
ಡಾಕ್ಟರ್: ತಾತಾ.....
ತಾತ: ನನ್ನ ಎಡಗಡೆ ಕಾಲು ಬಹಳ ನೋವತ್ತೆ.
ಡಾಕ್ಟರ್: ಅದು ವಯಸ್ಸಾಗಿರೋದ್ರಿಂದ ಹಾಗೆ ತಾತ.
ತಾತ: ಸುಮ್ಮನೆ ಏನೋ ಹೇಳ್ಬೇಡಿ ಡಾಕ್ಟ್ರೆ. ನನ್ನ ಬಲಗಾಲಿಗೂ ಅಷ್ಟೇ ವಯಸ್ಸಾಗಿದೆ, ಅದ್ಯಾಕೆ ನೋಯ್ತಿಲ್ಲ?
ಡಾಕ್ಟರ್: ಅದು ಹಾಗಲ್ಲ; ನಾವು ಯಾವುದರ ಮೇಲೆ ಭಾರ ಬಿಡ್ತೀವೋ ಅದು ನೋವು ಬರತ್ತೆ.
ತಾತ: ಆದರೆ ನಾನು ಭಾರ ಬಿಡೋದು ವಾಕಿಂಗ್ ಸ್ಟಿಕ್ ಮೇಲೆ. ಅದಕ್ಕೇ ಅಯೋಡೆಕ್ಸ್ ಹಚ್ಚಿಬಿಡ್ಲೇನು?
ಡಾಕ್ಟರ್: ತಾತಾ...
ತಾತ: ನೀವು ಡಾಕ್ಟರ್ಗಳೇ ಹಾಗೆ
ಡಾಕ್ಟರ್: ಹೇಗೆ?
ತಾತ: ಪೇಷೆಂಟ್ ಬರ್ತಾ ಇದ್ದಹಾಗೇ ತಾ ತಾ ಅಂತ ಬರೀ ಕೈಯೊಡ್ಡೋದೇ ಆಗ್ಹೋಯ್ತು.
ಡಾಕ್ಟರ್: ಪ್ಲೀಸ್ ಅಜ್ಜ, ನನ್ನ ತಲೆ ತಿನ್ಬೇಡಿ. ನಿಮ್ಮ ಕಂಪ್ಲೇಂಟ್ ಏನೂಂತ ಹೇಳಿ.
ತಾತ: ಬೆಳಗ್ಗೆ ಪಾರ್ಕಲ್ಲಿ ಜೋರಾಗಿ ಓಡಿದಾಗ ಎದೆ ಬಹಳ ಜೋರಾಗಿ ಹೊಡ್ಕೊಳತ್ತೆ
ಡಾಕ್ಟರ್: ಈ ವಯಸ್ಸಲ್ಲಿ ನೀವು ಜೋರಾಗಿ ಓಡ್ತೀರಾ?
ತಾತ: ನಾನಲ್ಲ
ಡಾಕ್ಟರ್: ಮತ್ತೆ?
ತಾತ: ಸೂಪರ್ ಆಗಿರೋ ಹುಡುಗಿಯರು ಓಡ್ತಾರೆ, ನನ್ನೆದೆ ಹೊಡ್ಕೊಳತ್ತೆ.
ಡಾಕ್ಟರ್: ಅಜ್ಜ... ಪ್ಲೀಸ್ ಬಿ ಸೀರಿಯಸ್
ತಾತ: ಯಾಕೆ ಡಾಕ್ಟ್ರೆ, ಸೀರಿಯಸ್ ಆದ್ರೆ ಒಳ್ಳೆ ಕಾಸು ಎಳ್ಕೋಬಹುದು ಅಂತಾನಾ?
ಡಾಕ್ಟರ್: ಥೂ, ಆ ತರಹ ಸೀರಿಯಸ್ಸಲ್ಲ ಅಜ್ಜ ನಾ ಹೇಳಿದ್ದು. ಸರಿ, ಈಗ ಇಲ್ಲಿಗೆ ಬಂದಿದ್ದಾದ್ರೂ ಯಾಕೆ ಹೇಳಿ.
ತಾತ: ಹೇಳಿದ್ನಲ್ಲ ಡಾಕ್ಟ್ರೇ, ಕಾಲು ಬಹಳ ನೋಯತ್ತೆ ಅಂತ
ಡಾಕ್ಟರ್: ಸರಿ. ಒಬ್ಬ ಸರ್ಜನ್ಗೆ ರೆಫರ್ ಮಾಡ್ತೀನಿ, ಅಲ್ಲಿ ತೋರಿಸಿ
ತಾತ: ಸರ್ಜನ್ನಾ? ಬೇಡ
ಡಾಕ್ಟರ್: ಯಾಕೆ?
ತಾತ: ಗಾದೆ ಕೇಳಿಲ್ಲವೇನು? ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ, ಸರ್ಜನರ ಸಹವಾಸ ಹೆಜ್ಜೇನು ಕಡಿದಂತೆ. ನನ್ನ ಫ್ರೆಂಡ್ಗೆ ಆಗಿದ್ದನ್ನ ಕೇಳಿ ಏನೇ ಆದರೂ ಸರ್ಜನ್ ಹತ್ರ ಹೋಗಬಾರದೂಂತ ಡಿಸೈಡ್ ಮಾಡಿದ್ದೀನಿ
ಡಾಕ್ಟರ್: ಏನಾಯ್ತು?
ತಾತ: ಹೊಟ್ಟೆ ಆಪರೇಷನ್. ಮೊದಲು ಮಾಡಿದರು. ಇವನಿಗೆ ಬಹಳ ಬಾಯಾರಿಕೆ ಶುರುವಾಯ್ತು.
ಡಾಕ್ಟರ್: ಏಕೆ?
ತಾತ: ಒಳಗೆ ಸ್ಪಂಜ್ ಬಿಟ್ಬಿಟ್ಟಿದ್ರು. ಮತ್ತೆ ಕೊಯ್ದ್ರು.
ಡಾಕ್ಟರ್: ಸರಿಹೋಯ್ತಾ?
ತಾತ: ಇಲ್ಲ. ಇದ್ದಕ್ಕಿದ್ದ ಹಾಗೆ ಆಕಡೆಯಿಂದ ಈ ಕಡೆಗೆ ತಿರುಗಿದಾಗಲೆಲ್ಲಾ ಒಳಗೆ ಕಚಕ್ ಅಂತ ಶಬ್ದ ಬರ್ತಿತ್ತು.
ಡಾಕ್ಟರ್: ಅಯ್ಯೋ, ಯಾಕಂತೆ?
ತಾತ: ಒಳಗೆ ಕತ್ತರಿ ಬಿಟ್ಬಿಟ್ಟಿದ್ರು. ಮತ್ತೆ ಹೊಟ್ಟೆ ಕೊಯ್ದಿದ್ದಾಯ್ತು.
ಡಾಕ್ಟರ್: ಆಗ ಸರಿಹೋಯ್ತೂನ್ನಿ.
ತಾತ: ಇಲ್ಲ. ಒಳಗೇ ಏನೋ ಚುಚ್ಚಿದಹಾಗೆ ಆಗ್ತಿತ್ತು. ನೋಡಿದ್ರೆ ಸೂಜಿ.
ಡಾಕ್ಟರ್: ಮತ್ತೆ ಆಪರೇಷನ್ ಆಯ್ತೂನ್ನಿ.
ತಾತ: ಇಲ್ಲ.
ಡಾಕ್ಟರ್: ಮತ್ತೆ?
ತಾತ: ಹೊಟ್ಟೆ ಮೇಲೆ ಒಂದು ಮ್ಯಾಗ್ನೆಟ್ ಕಟ್ಕೊಂಡ್ಬಿಟ್ಟಿದ್ದಾನೆ. ಈಗ ಸೂಜಿ ಅಲ್ಲಾಡದೆ ಒಂದೇ ಜಾಗದಲ್ಲೇ ಇರೋದ್ರಿಂದ ನೋವಿಲ್ಲ!
ಡಾಕ್ಟರ್: ಒಳಗೆ ರಸ್ಟ್ ಆಗ್ಬಿಟ್ರೆ?
ತಾತ: ಆಗಲ್ಲ, ಆಗಾಗ್ಗೆ ಹೊಟ್ಟೆಗೆ ಸ್ವಲ್ಪ ಎಣ್ಣೆ ಬಿಟ್ಕೊಳಕ್ಕೆ ಹೇಳಿದ್ದೀನಿ.
ಡಾಕ್ಟರ್: ಹಾಗೇ ಇರೋದು ಒಳ್ಳೇದಲ್ಲ ತಾತ. ತೆಗೆಸಿಕೊಂಡುಬಿಡಕ್ಕೆ ಹೇಳಿ.
ತಾತ: ‘ಡ, ಇನ್ನೇನಾದ್ರೂ ಒಳಗೆ ಬಿಡ್ತಾರೆ. ಇದೇ ವಾಸಿ’ ಅಂದ
ಡಾಕ್ಟರ್: ನೀವೇನಂದ್ರಿ?
ತಾತ: ಆಪರೇಷನ್ ಮಾಡಿಸ್ಕೋ, ಆದರೆ ಹೊಲಿಗೆ ಹಾಕಿಸ್ಕೋಬೇಡ ಅಂದೆ.
ಡಾಕ್ಟರ್: ಮತ್ತೆ?
ತಾತ: ಝಿಪ್ ಹಾಕಿಸ್ಕೋಂದೆ. ಏನೇ ಬಿಟ್ಟಿದ್ರೂ ಝಿಪ್ ಝರ್ ಅಂತ ಎಳೆಯೋದು, ತೆಗೆಯೋದು, ಝಿಪ್ ಎಳೆಯೋದು!
ಡಾಕ್ಟರ್: ಸೂಪರ್ ಐಡಿಯ ಅಜ್ಜ. ಆದರೂ, ನಿಮ್ಮ ಕಾಲುನೋವಿಗೆ ಒಮ್ಮೆ ಸರ್ಜನ್ನ ನೋಡಿಬಿಡಿ.
ತಾತ: ಬೇಡ.
ಡಾಕ್ಟರ್: ಯಾಕೆ?
ತಾತ: ನಮ್ಮ ಮನೆ ಹತ್ತಿರ ಇರೋ ಸರ್ಜನ್ ಬೋರ್ಡ್ ಹಾಕಿದ್ದಾನೆ.
ಡಾಕ್ಟರ್: ಏನಂತ?
ತಾತ: ನಮ್ಮಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರಿಗೆ ಶ್ರಾದ್ಧದ ಖರ್ಚು ಉಚಿತ ಅಂತ!
ಡಾಕ್ಟರ್: ಹೋಗಲಿ ಬಿಡಿ. ನಿಮಗೆ ಆಯುರ್ವೇದಿಕ್ ಟ್ರೀಟ್ಮೆಂಟೇ ಕೊಡ್ತೀನಿ.
ತಾತ: ಇದ್ದಿದ್ರಲ್ಲಿ ಸ್ವೀಟ್ ಆಗಿರೋ ಲೇಹ್ಯಾನೇ ಕೊಡಿ ಡಾಕ್ಟರ್
ಡಾಕ್ಟರ್: ಏನಾದರೂ ಡ್ರಿಂಕ್ಸ್ ಗಿಂಕ್ಸ್ ಅಭ್ಯಾಸ ಇದೆಯೇನು?
ತಾತ: ಈಗಿಲ್ಲ ಡಾಕ್ಟ್ರೆ. ನನಗೆ ಡ್ರಿಂಕ್ಸ್ ತೊಗೊಂಡ್ರೆ ಬಹಳ ನೆಗಡಿ ಆಗತ್ತೆ.
ಡಾಕ್ಟರ್: ಡಿಂಕ್ಸ್ ತೊಗೊಂಡ್ರೆ ನೆಗಡಿ ಆಗತ್ತಾ?
ತಾತ: ಹೂಂ ಕುಡಿದು ಬಂದಾಗ ಹೆಂಡತಿ ತಲೆಮೇಲೆ ನೀರು ಸುರೀತಾಳಲ್ಲಾ, ಅದರಿಂದ ನೆಗಡಿ ಆಗತ್ತೆ.
ಡಾಕ್ಟರ್: ಓಕೆ. ಅಲ್ಲಿಗೆ ನೋ ಡ್ರಿಂಕ್ಸ್ ಅಂತಾಯ್ತು. ಖಾರ ತಿಂತೀರಾ?
ತಾತ: ನನ್ನ ಹೆಂಡತಿ ಮಾತಿನ ಮುಂದೆ ಮೆಣಸಿನಪುಡೀನೂ ಸ್ವೀಟ್ ಡಾಕ್ಟ್ರೆ!
ಡಾಕ್ಟರ್: ಅಂದರೆ ಹೆಂಡತಿ ಮಾತು ಕೇಳ್ತೀರಾನ್ನಿ.
ತಾತ: ಕೇಳದೆ ಇದ್ರೆ ಕಿವಿ ಆಪರೇಷನ್ ಮಾಡಿಸ್ತೀನಿ ಅಂತಾಳೆ ಡಾಕ್ಟ್ರೆ.
ಡಾಕ್ಟರ್: ಡ್ರಿಂಕ್ಸು, ಖಾರ ಇಲ್ಲಾಂದ್ಮೇಲೆ ನಿಮ್ಮ ಕಾಲುನೋವಿಗೆ ಕಾರಣ ವಾಯುಬಾಧೆ ಅಲ್ಲ; ನಿಮ್ಮ ನಿದ್ರೆ ಹೇಗಿದೆ?
ತಾತ: ರಿಟೈರಾದ ಸ್ವಲ್ಪ ದಿವಸ ನಿದ್ರೇನೇ ಬರ್ತಿರಲಿಲ್ಲ.
ಡಾಕ್ಟರ್: ಆಮೇಲೆ?
ತಾತ: ನಾನು ವರ್ಕ್ ಮಾಡ್ತಿದ್ದ ಸರ್ಕಾರಿ ಕಚೇರಿಯಿಂದ ನಾನು ದಿನಾ ಕೂತು ನಿದ್ರೆ ಮಾಡ್ತಿದ್ದ ಚೇರ್ ತರಿಸ್ಕೊಂಡೆ. ಅದರಲ್ಲಿ ಕೂತ್ರೆ ಸಾಕು, ಹೈ ಕ್ಲಾಸ್ ನಿದ್ರೆ ಬರತ್ತೆ.
ಡಾಕ್ಟರ್: ಸರಿ; ನಿದ್ರೆ, ವಾಯು ಪ್ರಾಬ್ಲಂ ಅಲ್ಲಾಂತಾಯ್ತು. ನಿಮಗೆ ಯಾವಾಗ ನೋವು ಜಾಸ್ತಿ ಇರತ್ತೆ?
ತಾತ: ಶನಿವಾರ, ಭಾನುವಾರ.
ಡಾಕ್ಟರ್: ಅದೇನು?
ತಾತ: ನನ್ನ ಹೆಂಡತಿ ಕಿಟ್ಟಿ ಪಾರ್ಟಿಗೆ ಹೋಗಿರ್ತಾಳೆ.
ಡಾಕ್ಟರ್: ಅದಕ್ಕೂ ಇದಕ್ಕೂ ಏನು ಸಂಬಂಧ?
ತಾತ: ನಮ್ಮ ಮನೆ ಹಿಂಭಾಗದಲ್ಲಿ ಒಂದು ಲೇಡೀಸ್ ಹಾಸ್ಟೆಲ್ ಇದೆ.
ಡಾಕ್ಟರ್: ಸರಿ. ಅದಕ್ಕೂ, ಕಿಟ್ಟಿ ಪಾರ್ಟಿಗೂ, ಕಾಲುನೋವಿಗೂ ಏನು ಸಂಬಂಧ?
ತಾತ: ಸುಮ್ಮನೆ ಹಾಗೆ ನಿಂತ್ರೆ ಆ ಹಾಸ್ಟೆಲ್ನಲ್ಲಿ ಹುಡುಗಿಯರು ಚೆಲ್ಲುಚೆಲ್ಲಾಗಿ ಆಡೋದು ಕಾಣಲ್ಲ
ಡಾಕ್ಟರ್: ಅದಕ್ಕೆ?
ತಾತ: ಒಂದು ಏಣಿ ಹಾಕ್ಕೊಂಡು ನಿಲ್ತೀನಿ.
ಡಾಕ್ಟರ್: ಹೂಂ?
ತಾತ: ಬಲಗಾಲು ಕಾಂಪೌಂಡ್ ಮೇಲಿರತ್ತೆ, ನೋವಿರಲ್ಲ, ಎಡಗಾಲು ಏಣಿ ಮೇಲಿರತ್ತೆ, ನೋವು ಬರತ್ತೆ!
ಡಾಕ್ಟರ್: ತಾತಾ... ಈ ವಯಸ್ಸಲ್ಲೀ... ಹುಡುಗೀರ್ನ ಕದ್ದು ನೋಡೋದೂಂದ್ರೆ.... ಛೀ!
ತಾತ: ಹಾಗೆಲ್ಲಾ ಬಿಡಕ್ಕಾಗತ್ತಾ, ಇದು ನನ್ನ ಗೋಲ್ಡನ್ ಜ್ಯೂಬಿಲಿ ವರ್ಷ ಗೊತ್ತಾ?
ಡಾಕ್ಟರ್: ನಿಮಗೆ ಇನ್ನೂ ಐವತ್ತೇನಾ?
ತಾತ: ನನಗಲ್ಲ, ಹುಡುಗೀರ್ನ ನೋಡಕ್ಕೆ ಶುರು ಮಾಡಿ ಐವತ್ತು ವರ್ಷ. 16ಕ್ಕೆ ಶುರು ಮಾಡ್ದೆ, ಈಗ 66!
ಡಾಕ್ಟರ್: ಟ್ರೀಟ್ಮೆಂಟ್ ಬೇಕಾದ್ದು ನಿಮ್ಮ ಕಾಲಿಗಲ್ಲ, ತಲೆಗೆ. ಗೆಟ್ ಔಟ್ ತಾತ. ಯಾವುದಾದರೂ ಹುಚ್ಚಾಸ್ಪತ್ರೇಲಿ ಟ್ರೀಟ್ಮೆಂಟ್ ತೊಗೊಳ್ಳಿ, ಸರಿಹೋಗತ್ತೆ.
ತಾತ: ಅಲ್ಲೂ ಹೋಗಿದ್ದೆ. ಸೇರಿಸ್ಕೊಳಲ್ಲಾಂದ್ರು
ಡಾಕ್ಟರ್: ಯಾಕಂತೆ?
ತಾತ: ಅಲ್ಲಿ ವಾಸಿಯಾಗೋ ಹುಚ್ಚರನ್ನು ಮಾತ್ರ ಸೇರಿಸ್ಕೊಳ್ತಾರಂತೆ!
ಡಾಕ್ಟರ್: ಸರಿ ಅಜ್ಜ. ನಿಮಗೇನು ಟ್ರೀಟ್ಮೆಂಟ್ ಕೊಡಬೇಕೂಂತ ಗೊತ್ತಾಯ್ತು. ನಿಮ್ಮ ಮನೆಯ ಫೋನ್ ನಂಬರ್ ಏನು?
ತಾತ: ಯಾಕೆ?
ಡಾಕ್ಟರ್: ಅಜ್ಜಿಗೆ ಕಿಟ್ಟಿ ಪಾರ್ಟಿ ಮನೇಲೇ ಇಟ್ಕೊಳ್ಳಕ್ಕೆ ಹೇಳ್ತೀನಿ, ನಿಮ್ಮ ಆಟ ಕಟ್ ಆಗಿ, ನೋವು ಮಾಯ ಆಗತ್ತೆ.
ತಾತ: ಥ್ಯಾಂಕ್ಯೂ ವೆರಿ ಮಚ್. ನನಗೂ ಅದೇ ಬೇಕಾಗಿತ್ತು.
ಡಾಕ್ಟರ್: ಯಾಕೆ?
ತಾತ: ಇವಳ ಕಿಟ್ಟಿ ಪಾರ್ಟೀಲಿ ಹಾಸ್ಟೆಲ್ ಹುಡುಗೀರಿಗಿಂತ ಚೆನ್ನಾಗಿರೋವ್ರು ಸೇರ್ತಾರೆ. ಥ್ಯಾಂಕ್ಸ್ ಡಾಕ್ಟರ್. ತೊಗೊಳ್ಳಿ, ನಂಬರ್ ಬರ್ಕೊಳ್ಳಿ!!!
No comments:
Post a Comment