Tuesday 11 August 2020

ರಾಜಕಾರಣಿಗಳ ನೂತನ Dance ಮಾದರಿಗಳು

 


ವಾಹಿನಿಗಳಲ್ಲಿ Dance ಕರ್ನಾಟಕ Dance ಎಂದೋ, Dance ಮೇನಿಯಾ ಎಂದೋ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಇರುವುದೆಲ್ಲವ ಬಿಟ್ಟು ಇರದ ಹೊಸವುಗಳನ್ನು ನೀಡುವುದೇ ಕೊಳಕು ರಾಜಕಾರಣಿಗಳ ಗರಿಮೆಯಲ್ಲವೇ! ಇದೋ ಇತ್ತೀಚಿಗೆ ನರ್ತನಕ್ಷೇತ್ರಕ್ಕೆ ಸೇರ್ಪಡೆಯಾದ ನೂತನ Dance ಮಾದರಿಗಳು:
ಬರತ್ತಾ ನಾಟ್ಯ: ನೂರು ವರ್ಷ ಸಮೀಪಿಸಿದ ಅಜ್ಜನ ತಲೆಯಂತೆ ಸರ್ಕಾರ ಅಲುಗಾಡುತ್ತಿದೆ. ಉಚ್ಛ್ವಾಸ-ನಿಶ್ವಾಸಕ್ಕೆ ಅವಸ್ಥೆ ಪಡುವುದು ಅಜ್ಜನಿಗಾದರೆ ವಿಶ್ವಾಸಕ್ಕೆ ಅವಸ್ಥೆ ಪಡುವುದು ಸರ್ಕಾರದ ಪರಿಸ್ಥಿತಿಯಾಗಿದೆ. ಇಂತಹ ಸಮಯದಲ್ಲಿಹೊರಹೋಗಿರುವ ಶಾಸಕರ ಬೆಂಬಲ ಬರತ್ತಾ ಇಲ್ಲವಾ?’ ಎಂದು ಅನುಮಾನದಲ್ಲಿ ಕಣ್ಣಿಗೆ ಕೈ ಅಡ್ಡ ಇಟ್ಟುಕೊಂಡುಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿಎನ್ನುವಾಗ ಅತ್ತಿತ್ತ ಹುಡುಕಾಡುವ ನೃತ್ಯದ ಭಂಗಿಯನ್ನು ಅನುಸರಿಸಿ ಮಾಡುವ ನಾಟ್ಯವೇ ಬರತ್ತಾ ನಾಟ್ಯ. 

ಭರ್ತಿ ನಾಟ್ಯ: ಬೆಂಬಲಕ್ಕೆ ಬರುವುದಕ್ಕೆಕಂಡೀಷನ್ಸ್ ಅಪ್ಲೈಅಂದಾಗ, ‘ಓಕೆ, ವಿ ವಿಲ್ ಸಪ್ಲೈಎನ್ನುತ್ತಾ ಅವರು ಕೇಳಿದುದನ್ನೆಲ್ಲ, ‘ಬತ್ತ ರಾಗಿ ಕೊಯ್ಲಿಗೆ ಬಂತು (ವಿರಾಟ್ ಕೊಯ್ಲಿಗೆ ಅಲ್ಲ!) ಕೊಯ್ದ ಬೆಳೆಯು ಕಣಕ್ಕೆ ಬಂತುಎನ್ನುತ್ತಾ ಕಣವನ್ನು ತುಂಬುವುದನ್ನು ತೋರಿಸುವ ಭಂಗಿಯಲ್ಲಿ ಸಪ್ಲೈ ಮಾಡಿದುದನ್ನು ತೋರಿಸುವ Dance ರೀತಿಯೇ ಭರ್ತಿ Dance.
ಬಾ ಇತ್ತ ನಾಟ್ಯ: ಅತ್ತ ಸತ್ಯಭಾಮೆ, ಇತ್ತ ರುಕ್ಮಿಣಿ. ಮಧ್ಯದಲ್ಲಿ ಕೃಷ್ಣ. ‘ನೀಲ ಮೇಘ ಶ್ಯಾಮ, ನಿತ್ಯಾನಂದ ಧಾಮ ರುಕ್ಮಿಣಿಗಾಗಿಎಂದು ರುಕ್ಮಿಣಿ ಹಾಡಿದಂತೆ ಸಿಂಗಲ್ ಪಾರ್ಟಿಯೂ,  ನೀಲ ಮೇಘ ಶ್ಯಾಮ, ನಿತ್ಯಾನಂದ ಧಾಮ ಇಬ್ಬರಿಗಾಗಿ, ಎಂದೂ ಇಬ್ಬರಿಗಾಗಿಎಂದು ಸತ್ಯಭಾಮೆ ಹಾಡುವಂತೆ ಸಮ್ಮಿಶ್ರ ಪಾರ್ಟಿಯೂ ವಿಕಾರವಿಕಾರವಾಗಿ ಹಾಡುತ್ತಾಅತೃಪ್ತರನ್ನುಇತ್ತ ಬಾ’, ‘ಇತ್ತ ಬಾಎಂದು ಕೈ ಹಿಡಿದು ಸೆಳೆಯುವ ವಿಶೇಷಸಾಂವಿಧಾನಿಕನೃತ್ಯವೇಬಾ ಇತ್ತ ನಾಟ್ಯ’.
ಬೈಲಾಟ: ಇದು ಯಕ್ಷಗಾನದ ಬಯಲಾಟಕ್ಕಿಂತ ಬಹಳ ಭಿನ್ನವಾದ ಮಾದರಿ. ಪುರಾತನ ಕಾಲದಲ್ಲಿ ಯಾರೋ ಮಾಡಿದ ತಪ್ಪನ್ನು ಇಂದು ಜ್ಞಾಪಿಸಿಕೊಂಡು ಎಂದೋ ಸತ್ತು, ಗೋರಿಯಲ್ಲಿ ಮೂಳೆಗಳೂ ಮಣ್ಣಾಗಿರುವ ವ್ಯಕ್ತಿಯಿಂದ ಹಿಡಿದು ಇನ್ನೂ ಗರ್ಭದಲ್ಲಿರುವ ಅವರ ವಂಶದ ಕುಡಿಯವರೆಗೆ ಅಮೆರಿಕನ್ನರಿಂದ ಎರವಲು ಪಡೆದ ಬೈಗುಳಗಳ ಜೊತೆಗೆ ಗುಡ್ ಓಲ್ಡ್ ಗ್ರಾಮ್ಯ ಬೈಗುಳಗಳನ್ನು ಸೇರಿಸಿಕೊಂಡು ಬೈಯುತ್ತಾ, ಲಲಾಟವನ್ನು ಘಟ್ಟಿಸಿಕೊಂಡು ವಿಲವಿಲನೆ ಒದ್ದಾಡುತ್ತಾ ಟಿವಿಗಳಿಗೆ ಅಪರಿಮಿತಬ್ರೇಕಿಂಗ್ ನ್ಯೂಸ್ಕೊಡಲು ಉದ್ಯುಕ್ತವಾಗುವ ಪರಿಯೇ ಬೈಲಾಟ. ಇದರ ಮತ್ತೊಂದು ಪ್ರಭೇದವೂ ಇದೆ. ಅದನ್ನು ಬೈಲೂಟಿ ಎಂದು ಕರೆಯುತ್ತಾರೆ. ನಾಟ್ಯಕ್ರಮದಲ್ಲಿ ಬೈದೂ ಬೈದೂ, ಬೈಗುಳ ನಿಲ್ಲಿಸೆಂದರೆ ಇಂತಿಷ್ಟು ಹಣ ನೀಡಬೇಕೆಂದುಖೂಳ ನಾ ಬಂದಿರುವೆ; ಬಾಗಿಲಲಿ ನಿಂದಿರುವೆ; ಲೂಟಿ ಮುಕ್ತದಿ ನೀಡಿ ಮರೆಯಾಗು ಗುರುವೆಎಂದು ಹೆದರಿಸುವರಕ್ಕಸಭಂಗಿ ನೃತ್ಯವೇ ಬೈಲೂಟಿ.

ಥೂಛೀಪುಡಿ ನೃತ್ಯ: ಕುಶೀಲವ ಎಂದರೆಪಯಣಿಸುವ ಕವಿ, ನಾಟ್ಯಗಾರಎಂದರ್ಥ. ಕುಶೀಲವ ಪುರ ಎಂಬುದು ಆಂಧ್ರಪ್ರದೇಶದ ಒಂದು ಹಳ್ಳಿಯಾಗಿದ್ದು, ಅದು ಜನರ ನಾಲಿಗೆಗೆ ಬಿದ್ದು ಕುಚೀಲವಪುರ ಆಗಿ, ಕುಚೀಲಪುರದಲ್ಲಿಯೇ ಉಗಮವಾದ ನೃತ್ಯಕ್ರಮಕ್ಕೆ ಕುಚೀಲಪುರ ಡ್ಯಾನ್ಸ್.... ಕುಚೀಪುರ ಡ್ಯಾನ್ಸ್.... ಕುಚೀಪುಡಿ ಡ್ಯಾನ್ಸ್ ಎಂದು ಕಾಲಕ್ರಮೇಣ ಬದಲಾಯಿತು. ಇದರ ಕ್ರಮದಂತೆಯೇ ಮೊದಲು ವಿವಿಧ ಪಾತ್ರಗಳ (ಇಲ್ಲಿ ಪಕ್ಷಗಳ) ಅಭ್ಯರ್ಥಿಗಳನ್ನು ಪರಿಚಯಿಸಿ, ನಂತರ ಪಾತ್ರಗಳಗುಣಗಾನಮಾಡಿ ಆದಮೇಲೆ, ಪಾತ್ರಗಳೇ ತಮ್ಮ ವಿಷಯಗಳನ್ನು ವಿಷದವಾಗಿ ಮಂಡಿಸುವ ನೃತ್ಯವೇ ಕುಚಿಪುಡಿಯ ಸಂಪೂರ್ಣ ಕುಲಗೆಟ್ಟ ಮತ್ತು ಎಂದಿಗೂ ಆಡಬಾರದ, ಹಾಗೂ ಅದೇ ಕಾರಣಕ್ಕಾಗಿ ರಾಜಕಾರಣಿಗಳು ಆಡುವ, ನೃತ್ಯವೇ ಥೂಛೀಪುಡಿ ನೃತ್ಯ. ಇದರಲ್ಲಿ ಪ್ರತಿ ಪಕ್ಷದ ಅಭ್ಯರ್ಥಿಯ ಚಿತ್ರವನ್ನು ಮೊದಲು ತೋರಿಸಿ, ಅವನ ಹಗರಣಗಳನ್ನು ವಿವರವಾಗಿ ಮಂಡಿಸಲಾಗುತ್ತದೆ. ನಂತರ ಅಭ್ಯರ್ಥಿಯೇ ಬಂದುಹಗರಣ ಆದುದು ನನ್ನಿಂದಲ್ಲ...’ ಎಂದು ಆರಂಭಿಸಿ, ‘ನಾನೊಬ್ನೇನಾ ತಿಂದಿರೋದೂ... ಆಪೊಸಿಷನ್ನವರೂ ಶಾಮೀಲ್ಆಗಿ ತಿಂದಿಲ್ವಾ...’ ಎನ್ನುವ ಮಟ್ಟ ತಲುಪುವವರೆಗೆ ವಿವಿಧ ಭಂಗಿಗಳನ್ನು ಪ್ರದರ್ಶಿಸಿ, ಗುಟ್ಕಾ ಪ್ರಿಯರು ಬೀದಿಯಲ್ಲಿ ಹೋಗುವಾಗ ವಿವಿಧ ರೀತಿಯಲ್ಲಿ ಉಗಿಯುವಂತೆ ಥೂ ಎನ್ನುತ್ತಾ, ಮಾಸ್ಟರ್ ಹಿರಣ್ಣಯ್ಯನವರಿಗೆ ರಾಜಕಾರಣಿಯ ಚಿತ್ರವನ್ನು ತೋರಿಸಿದರೆ ಅವರ ಮುಖದಲ್ಲಿ ಮೂಡುತ್ತಿದ್ದಛೀತ್ವವನ್ನು ಪ್ರದರ್ಶಿಸುತ್ತಾ ಪುಡಿ ಪುಢಾರಿಗಳು ಮಾಡುವ ನೃತ್ಯವೇ ಥೂಛೀಪುಡಿ ನೃತ್ಯ.
ಕಟ್ತಕ್ಕೊಳಿ Dance: ಇದು ಚುನಾವಣೆಗೆ ಮುನ್ನ, ಚುನಾವಣೆ ನಡೆದು ಅತಂತ್ರ ಸ್ಥಿತಿ ಉಂಟಾದಾಗ ಮತ್ತು ಶಾಸಕರು ರೆಸಾರ್ಟ್ಗಳಲ್ಲಿ ಸೇರಿದಾಗ ಆಡುವ ವಿಶೇಷ ನೃತ್ಯರೂಪಕ. ಮುಂಚೆ ರೆಸಾರ್ಟಿನ ಬಾಗಿಲಿನಿಂದಅತೃಪ್ತರುಇರುವ ರೂಮಿನವರೆಗೆ ವಿವಿಧ ಪಕ್ಷಗಳವರು ಕೈಯಲ್ಲಿ ಸೂಟ್ ಕೇಸ್ ಹಿಡಿದು ವಿವಿಧ ರೀತಿಯ ಹೆಜ್ಜೆಗಳನ್ನು ಹಾಕುತ್ತಾನಿನಗಾಗಿಯೇ... ಸೂಟ್ಕೇಸೂ ಊಊ.... ಬ್ರೀಫ್ಕೇಸೂ ಊಊ.... ಬಾಗಿಲ್ತೆಗಿ ಚೆನ್ನ; ಮರೆಯದೆ ಇನ್ನ.... ಬಾ ನನ್ ಪಕ್ಷಕೆಎಂದು ಹಾಡುವ ಪರಿ. ಇದರ ಮೂಲ ಹೆಸರುಕಟ್ಟು ತೆಗೆದುಕೊಳ್ಳಿಎಂದು ಇದ್ದದ್ದು, ‘ನಿಂಬೆಹಣ್ಣು ಮಂತ್ರಿಎಂದೇ ಫೇಮಸ್ ಆದ ಬಂದರಣ್ಣ ಎಂಬುವರ ಕನ್ನಡದ ಹುಚ್ಛಾರದ ಪರಿಣಾಮವಾಗಿಕಟ್ತಕ್ಕೊಳಿಎಂದು ಬದಲಾಯಿತೆಂದು ಮೂರು ದಿನಗಳಿಂದ ಬರುತ್ತಿರುವಬ್ರೇಕಿಂಗ್ ನ್ಯೂಸ್ಹೇಳಿದೆ.
ಮೋಸಿನಿಯಾಟ್ಟಮ್: ನಾನೂ ನೀನೂ ಜೋಡಿ; ಜೀವನ ಎತ್ತಿನ ಗಾಡಿಎಂದು ಆರಂಭಿಸಿ, ‘ನೀನೆಲ್ಲೋ ನಾನಲ್ಲೇ... ಜೀವ ನಿನ್ನಲ್ಲೇಎನ್ನುವವರೆಗೆ ಡ್ಯುಯೆಟ್ ಹಾಡುತ್ತಾ, ಛಕ್ಕನೆ ಟ್ಯೂನ್ ಬದಲಿಸಿಹೃದಯ ಸಮುದ್ರ ಕಲಕಿ ಹತ್ತಿದೆ ರೋಷದ ಬೆಂಕಿಎನ್ನುತ್ತಾ ದೂರ ಸರಿದು, ಜೊತೆಗಾರ ಬಳಿ ಬರಲು ಯತ್ನಿಸಿದಾಗದೂರ ದೂರ ಅಲ್ಲೆ ನಿಲ್ಲು ಕ್ರೂರ ದೆವ್ವವೆಎನ್ನುತ್ತಾಮೋಸಗೋಪುರಎಂದು ಬೋರ್ಡ್ ಇರುವತ್ತ ಸಾಗಿ, ಗೋಪುರಕ್ಕಿರುವ ಮೋಸದ ಮೆಟ್ಟಿಲುಗಳನ್ನು ಕುಣಿಕುಣಿಯುತ್ತಲೇ ಸಾಗುವ ವಿಶೇಷ ರುದ್ರ ನೃತ್ಯವೇ ಮೋಸಿನಿಯಾಟ್ಟಮ್. ಇದನ್ನು ಪ್ರಪಂಚಕ್ಕೆ ಡೆವಿಲ್ ದೌಡ್ ಎಂಬುವರು ಪರಿಚಯಿಸಿದರಂತೆ.
ಲಕ್ಷಗಾನ Dance:ರುಚಿಗೆ ತಕ್ಕಷ್ಟು ಉಪ್ಪುಎನ್ನುವ ರೀತಿಯಲ್ಲಿಯೇಸಮಯಕ್ಕೆ ತಕ್ಕಷ್ಟು ವಿಕ್ಸುಕಣ್ಣಿಗೆ ಲೇಪಿಸಿಕೊಂಡು, ದೂರದೂರದವರೆಗೆ ಕೇಳಿಸುವಂತೆ ಸತ್ತವರ ಮನೆಯ ಮುಂದಿನ ತಮಿಳು ಬ್ಯಾಂಡಿನವರನ್ನೂ ಮೀರಿಸುವಂತೆ ವಿಕವಿಕಾರವಾಗಿ ರೋದಿಸುತ್ತಾ ಹ್ಯಾಲೋಯಿನ್ ಡೇ ಡ್ಯಾನ್ಸ್ ಇವರ ನೃತ್ಯದ ಮುಂದೆ ಸೌಮ್ಯ ನೃತ್ಯದಂತೆ ತೋರುವ ರೀತಿಯಲ್ಲಿ ಕುಣಿಯುವ ನೃತ್ಯವೇ ಲಕ್ಷಗಾನ ಡ್ಯಾನ್ಸ್.  ಇದನ್ನು ಆರಂಭಿಸಲು ಹಣ ಕೊಡಬೇಕಾಗಿಲ್ಲವಾಗಿದ್ದು ನಿಲ್ಲಿಸಲು ಲಕ್ಷ ಲಕ್ಷ ಸುರಿಯಬೇಕಾದುದೇ ನೃತ್ಯದ ವೈಶಿಷ್ಟ್ಯ.

ಹಣಪದ ನೃತ್ಯ: ಹಣದಲ್ಲಿ ಕೀಳ್ಯಾವುದೋ ಹುಚ್ಚಪ್ಪ; ಪಕ್ಷದಲ್ಲಿ ಮೇಲ್ಯಾವುದೋ; ಕೋಟಿ ಲೂಟಿಯ ಮಾಡೋ ಪಕ್ಷಗ್ಳೆ ಇಲ್ಲೆಲ್ಲ ಕೀಳ್ಯಾವುದ್ಮೇಲ್ಯಾವುದೋ; ಹೋಯ್! ಕೀಳೋದೇ ಮೇಲೆಂಬ್ವುದೋ; ದೈಯ್ಯ ಕುತ್ತಾ ಗಿಡಿಗಿಡಿ ದೈಯ್ಯ ಕುತ್ತಾ; ಹಾ ಕಿತ್ತಿರಿ; ಸರಿ ಕಿತ್ತಿರಿ; ಕಿತ್ತಿರಿ ಕಿತ್ತಿರಿ ಕಿತ್ತಿರಿ ಕಿತ್ತಿರಿಎನ್ನುತ್ತಾ ಪ್ರಜಾಪ್ರಭುತ್ವ ಎಂಬ ಗೊಂಬೆಯನ್ನು ಗೋರಿಗೆ ಎಳೆಯುತ್ತಾ ಸ್ಮಶಾನಸದೃಶವಾದ ಭೂತದ ಕುಣಿತವನ್ನು ಪ್ರದರ್ಶಿಸುವ ಪರಿಯೇ ಹಣಪದ ನೃತ್ಯ.  
ಬ್ರೇಕಿಂಗ್ Dance: ಪಾರ್ಲಿಮೆಂಟಿನ ಕುರ್ಚಿ, ಮೇಜು, ಮೈಕು, ಪೇಪರ್ ವೇಯ್ಟ್, ಇತ್ಯಾದಿಗಳನ್ನು ಗಾಳಿಗೆ ತೂರಿ, ಅವು ಚೂರುಚೂರಾದಾಗ ಕತ್ತೆಯಂತೆ ಕಿರುಚಿದ (ಬ್ರೇ ಎಂದರೆ ಕತ್ತೆಯ ಕೂಗಲ್ಲವೆ) ಬ್ರೇ-ಕಿಂಗ್ಗಳ ನೃತ್ಯವೇ ಬ್ರೇಕಿಂಗ್ ಡ್ಯಾನ್ಸ್. ಮಂತ್ರಿಗಳ ಮಕ್ಕಳು ಮಧ್ಯರಾತ್ರಿಯಲ್ಲಿ ನುಗ್ಗಿದ ಹೊಟೇಲ್ಗಳಲ್ಲಿ ಮತ್ತು ಮಂತ್ರಿಗಳು ವಿಧಾನಸೌಧವೂ ಸೇರಿದಂತೆ ಮನಬಂದಲ್ಲಿ ಆಡುವ ನೃತ್ಯ ಬಹಳ ಅಧಿಕಾರಜನಪ್ರಿಯ.
ಎಲ್ಲ ನೃತ್ಯಭಂಗಿಗಳೂ ಮುಂದಿನ ಕೆಲವೇ ಕ್ಷಣಗಳಲ್ಲಿ ಟಿವಿ ಪರದೆಯ ಮೇಲೆ ಮೂಡಿ ಬರಲಿವೆ. ವೀಕ್ಷಿಸಿ, ಆನಂದಿಸಿ.
ವಿ.ಸೂ: ಪಕ್ಕದಲ್ಲೇ vicks ಡಬ್ಬಿ ಇರಲಿ.
ವಿ.ವಿ.ಸೂ.: ಕಷ್ಟವೆನಿಸಿದಾಗ ರಿಮೋಟ್ ಬಳಸುವ ಜಾಣ್ಮೆ ಇರಲಿ.

Thursday 2 July 2020

ಕೂಸನ ಕೇಳೀರಾ.....


ಅಳುವ ಕಂದನ ತುಟಿಯು ಹವಳದಾ ಕುಡಿಹಂಗ
ಕುಡಿಹುಬ್ಬು ಬೇವಿನೆಸಳಂಗ ಕಣ್ಣೋಟ
ಶಿವನ ಕೈಯಲಗು ಹೊಳೆದಂಗ
ಎಂದದ್ದೇನೋ ಸರಿ. ಆದರೆ ಮುಖ್ಯ ವಿಷಯವನ್ನೇ ಬಿಟ್ಟುಬಿಟ್ಟರಲ್ಲಾ.... ಅಳುವ ಕಂದನ ಕಂಠದ ಬಗ್ಗೆ ಏನೇನೂ ಹೇಳದೆ ತುಟಿಯ ಬಗ್ಗೆ ಮಾತ್ರ ಹೇಳಿದ್ದನ್ನು ಕಂಡರೆ ಇದು ಕಂದನ ಜಾಹೀರಾತೇ ಇರಬೇಕೆನಿಸುತ್ತದೆ. ಕಷ್ಟವನ್ನು ಮರೆಮಾಚಿ ಇಷ್ಟವನ್ನು ಮುಂಚಾಚುವ ವಿಷಯಸೂಚಿಯೇ ಜಾಹೀರಾತು!
ಕೋವಿಡನ ಕಾಲ. ಸಾಕಿದ ನಾಯಿಗಳು ವಾಕಿಂಗ್ ಹೋಗುವುದಕ್ಕಿಂತ ಕಡಿಮೆ ಸಮಯವೂ ಮುಖವಾಡ ಧರಿಸದೆ ಹೊರಹೋಗಲು ಮನುಜರಿಗೆ ಅನುಮತಿ ಇರದ ಕಷ್ಟದ ದಿನಗಳು. ಹೊಸಮನೆಗೆ ಸೇರುವ ಹಲ್ಲಿಯಂತೆಅಡುಗೆಮನೆಯ ದೊಡ್ಡ ಮೂಟೆಯ ಹಿಂದಿನ ಸಣ್ಣ ಸಂದಿಯಲ್ಲಿ ಸೇರುವ ಇಲಿಯಂತೆಮಸ್ಕಿಟೋ ಮೆಷ್ ಹಾಕಿದ್ದರೂ ಒಳಸೇರಿ ಬೀಗುವ ಸೊಳ್ಳೆಯಂತೆಕೋವಿಡನ ಸಂಚಾರ ನಿರ್ಬಂಧವನ್ನು ಧಿಕ್ಕರಿಸಿ ಅದಾವುದೋ ಮಾಯದಲ್ಲಿ ಪಕ್ಕದ ಮನೆಗೆ ಮಗುವೊಂದು ಸೇರಿಬಿಟ್ಟಿತು. ಅದು ಸೇರಿತೆಂದು ತಿಳಿದುದು ಮುಖದರ್ಶನದಿಂದಲ್ಲಕಂಠಘೋಷದಿಂದ.
ರಾತ್ರಿಯ ನೀರವತೆದಿಂಬನ್ನು ಕುತ್ತಿಗೆಗೆ ಬೇಕಾದ ಕೋನದಲ್ಲಿ ಪೇರಿಸಿಕೊಂಡುಹೊದಿಕೆ ಸರಿಮಾಡಿಕೊಂಡುಪವಡಿಸಿಹಾಸಿಗೆಯ ಬಳಿಯೇ ತೂಗಾಡುತ್ತಿರುವ ಸ್ವಿಚ್ ಆರಿಸುತ್ತೀರಿ. ಕ್ರ್...ಕ್ರ್...ಕ್ರ್... ಎನ್ನುವ ಸದ್ದು ಶುರುವಾಗುತ್ತದೆ. ಲೈಟ್ ಹಾಕಿದರೆ ಸದ್ದು ನಿಲ್ಲುತ್ತದೆ. ಸದ್ದು ಬೆಳಕುಗಳ ಈ ಆಟದಲ್ಲೇ ರಾತ್ರಿ ಕಳೆದು ಬೆಳಗ್ಗೆ ಏನೋ ಬರೆಯಲೆಂದು ಟೇಬಲ್ ಬಳಿ ಹೋದರೆ ಕೆಳಗೆ ಕೇರಮ್ ಬೋರ್ಡ್ಗೆ ಬಳಸಲು ಯೋಗ್ಯವಾದಂತಹ ಬಿಳಿಯ ಪುಡಿ ಬಿದ್ದಿರುತ್ತದೆ. ಸೂಕ್ಷö್ಮವಾಗಿ ಗಮನಿಸಿದರೆ ಟೇಬಲ್ಲಿನ ಡ್ರಾಯರ್‌ನಲ್ಲಿ ಸಣ್ಣ ತೂತಿನಿಂದ ಪುಡಿ ಉದುರುತ್ತಿರುವುದು ತಿಳಿಯುತ್ತದೆ. ರಾತ್ರಿ ನಿಮ್ಮ ನಿದ್ರೆಗೆ ಪಕ್ಕವಾದ್ಯ ನುಡಿಸಿದ್ದು ಕುಟ್ಟೆಹುಳ ಎಂದು ತಿಳಿಯುವುದೇ ಆಗ.

ಕೊಂಚ ಹಿಂದಿನ ಕಾಲಕ್ಕೆ ಧಾವಿಸಿ. ಆಗ ನೀವು ಎಲ್ಲಿ ಬೇಕೋ ಅಲ್ಲಿಗೆಬೇಕೆನಿಸಿದಾಗ ಹೋಗುವ

ಸ್ವಾತಂತ್ರ್ಯವಿತ್ತು. ಸಿಟಿ ಬೋರು. ರೆಸಾರ್ಟಿಗೆ ಹೋಗೋಣ’ ಎಂದು ಹೋದರೆ ಯಾವುದೋ ಕೀಟ ಕರ್ಣಕಠೋರವಾದ ಸದ್ದನ್ನು ಹೊರಡಿಸುತ್ತಲೇ ಇರುತ್ತದೆ. ಸಂಗೀತವನ್ನು ಆಗಷ್ಟೇ ಕಲಿಯಲು ಆರಂಭಿಸಿದ ವಿದ್ಯಾರ್ಥಿಯಂತೆ ಅಪರಿಮಿತ ಉತ್ಸಾಹದಿಂದ ದನಿಗಾರಿಕೆ ನಡೆಸುವ ಕೀಟವನ್ನು ಚಚ್ಚಿಹಾಕಲು ಕೋವಿಯನ್ನು ಬಳಸಲೂ ನೀವು ಸಿದ್ಧ. ಆದರೆ ಅದು ಕಣ್ಣಿಗೆ ಬಿದ್ದರಲ್ಲವೆ! ಜೀರುಂಡೆಗಳೇ ಹಾಗೆ!
ಪಕ್ಕದ ಮನೆಯ ಮಗು ಕುಟ್ಟೆಹುಳದಂತೆ ಅಳು ಆರಂಭಿಸಿ ಜೀರುಂಡೆಯಂತೆ ಆಲಾಪ ಮಾಡಿ ವೇಗವಾಗಿ ಚಲಿಸುತ್ತಿರುವ ಕಾರಿಗೆ ಸಡನ್ ಬ್ರೇಕ್ ಹಾಕಿದಾಗ ಹೊರಡುವ ಸ್ಕ್ರೀಚ್ ಸದ್ದಿನ ತಿಲ್ಲಾನಕ್ಕಿಳಿಯುತ್ತಿತ್ತು. ಕುಟ್ಟೆಯ ಮಂದ್ರದಿಂದ ಜೀರುಂಡೆಯ ಕೇದಾರಕ್ಕೇರಿ ಬ್ರೇಕಿನ ತಾರಕಕ್ಕೆ ಸೇರುವ ಅದರ ಪರಿಗೆ ಇನ್ನಾವ ಕರ್ಕಶತೆಯೂ ಸಾಟಿಯಿಲ್ಲ. ಕಾಲವೂ ಅಷ್ಟೆ. ಮುದ್ದಾಡಿ ರಮಿಸಲು ಬಂದಾಗ ಒಂದನೆಯ ಕಾಲದಲ್ಲಿ ಅಳುತ್ತಿದ್ದ ಅದು ಗದರಿದಾಗ ಎರಡನೆಯ ಕಾಲಕ್ಕೆ ದಾಟಿ ಅಮ್ಮನ ಕೈಬೆರಳು ಬೆನ್ನನ್ನು ಚುರುಗುಟ್ಟಿಸಿದಾಗ ಮೂರನೆಯ ಕಾಲವನ್ನು ತಲುಪಿ ಅಲ್ಲೇ ಹಲವಾರು ನಿಮಿಷ ಉಳಿಯುತ್ತಿತ್ತು. ಒಂದು ಗಂಟೆ ರೋದನ ಕಚೇರಿಒಂದು ಗಂಟೆ ನಿದ್ರೆಮತ್ತೊಂದು ಗಂಟೆ ರೋದನ ಕಚೇರಿಯ ಟೈಮ್‌ಟೇಬಲ್ ಇಟ್ಟುಕೊಂಡಿದ್ದ ಆ ಮಗು ಕೆಲವೊಮ್ಮೆ ನಿದ್ರೆಯನ್ನು ಕಡಿಮೆ ಮಾಡುತ್ತಿತ್ತೇ ವಿನಹ ಅಳುವಿನಲ್ಲಿ ವಿಳಂಬಕಾಲ ಇಲ್ಲವೇ ಇಲ್ಲ.
ನನಗೆ ಅಚ್ಚರಿ ಆಗುತ್ತಿದ್ದುದು ಆ ಮಗುವಿನ ಟೈಮ್ ಸೆನ್ಸ್. ಈಗತಾನೇ ಅಳು ಆರಂಭಿಸಿದೆ. ಒಂದು ಗಂಟೆ ಹೊರಗೆ ಸುತ್ತಾಡಿ ಬರುತ್ತೇನೆ’ ಎನ್ನುತ್ತಾ ಸ್ಯಾನಿಟೈಝರ್ ಹಸ್ತನಾಗಿಮುಖವಾಡಮುಖಿಯಾಗಿ ಹೊರಬಿದ್ದರೆ ಇತ್ತ ಮಗುವೂ ಕೂಡಲೆ ನಿದ್ರೆಗೆ ಜಾರುತ್ತಿತ್ತಂತೆ. ಪೊಲೀಸರ ಕಣ್ಣು ತಪ್ಪಿಸಿದಪ್ಪನೆಯ ಮುಖವಾಡವನ್ನು ತೂರಿಕೊಂಡು ಬರುವ ದುರ್ಗಂಧವನ್ನು ಬೀರುವ ಸಂದಿಗಳಲ್ಲಿ ಕ್ರಮಿಸಿಹಾಗೂ ಹೀಗೂ ಒಂದು ಗಂಟೆ ಕಳೆದುಮನೆಯ ಗೇಟ್ ತಲುಪಿದರೆಕುಟ್ಟೆಹುಳದ ಸದ್ದು ಆರಂಭವಾಗುತ್ತಿತ್ತು. ಕೆಲವೊಮ್ಮೆ ಮನೆಯಲ್ಲೇ ಸ್ಕಿಪಿಂಗ್ ಮಾಡಿಗಸಗಸೆ ಪಾಯಸ ಕುಡಿದುನಿದ್ರೆಗೆ ಜಾರಿಕನಸಿನ ಲೋಕದ ದ್ವಾರದಲ್ಲಿ ನಿಂತು ಅಪ್ಸರೆಯರ ಮೊದಲ ಸುತ್ತಿನ ನೃತ್ಯದ ಆರಂಭವನ್ನು ನೋಡಲು ಉತ್ಸುಕನಾಗಿ ನಿಂತುಕಾಳಿದಾಸನ ವರ್ಣನೆಯ ತುಂಡೊಂದು ಮೈದಾಳಿಮೊದಲ ಹೆಜ್ಜೆಯನ್ನಿಟ್ಟು ನೂಪರುವನ್ನು ಝಲ್ ಎನಿಸುವ ಸಮಯಕ್ಕೆ ಸರಿಯಾಗಿ ಮಗು ಎರಡನೆಯ ಕಾಲದಿಂದಲೇ ರೋದನ ಆರಂಭಿಸಿ ನನ್ನನ್ನು ಸಗ್ಗದಿಂದ ಪಾತಾಳಕ್ಕೆ ದಿಢೀರನೆ ಉರುಳಿಸಿಬಿಡುತ್ತಿತ್ತು. ಏದುಸಿರಿನ ವ್ಯಕ್ತಿಯೊಬ್ಬ ಮೊದಲೇ ಕೆಟ್ಟಿರುವ ನೆಟ್‌ವರ್ಕ್ನಲ್ಲಿ ಏನೋ ಒಳ್ಳೆಯ ಆಫರ್’ ಕೊಡಲು ತೊಡಗಿದ್ದುಆಫರನ್ನು ಸರಿಯಾಗಿ ಕೇಳಲು ಕಿವಿ ನಿಮಿರಿಸಿಕೊಂಡಾಗ ಆ ಏದುಸಿರಿನವನ ಸದ್ದನ್ನು ಸಂಪೂರ್ಣವಾಗಿ ಅಡಗಿಸುವ ಮಟ್ಟಕ್ಕೆ ರೋದಿಸಲು ತೊಡಗುತ್ತಿತ್ತು ಕೂಸು. ಟಿವಿಯಲ್ಲಿ ರುದ್ರಭೀಕರವಾಗಿ ಬ್ರೇಕಿಂಗ್ ನ್ಯೂಸ್’ ಒದರುವ ಗಾರ್ದಭಕಂಠಿಗಳ ಘೋಷವನ್ನೂ ಹಿಂದಿಕ್ಕುತ್ತಿದ್ದುದೊಂದೇ ಈ ರೋತಿಯಿಂದ ನನಗಾಗುತ್ತಿದ್ದ ಪ್ರಯೋಜನ.


ಗೀತೆ ಎಷ್ಟೇ ಕರ್ಕಶವಿರಲಿಅದಕ್ಕೊಂದು ಪಕ್ಕವಾದ್ಯ ಜೋಡಿಸುವುದು ಸಂಗೀತದ ಸಂಪ್ರದಾಯ. ಇದಕ್ಕೆ ಈ ಮಗುವಿನ ರೋದನವೂ ಹೊರತಾಗಿರಲಿಲ್ಲ. ಆ ದಿನ! ಅದೆಂತು ಮರೆಯಲು ಶಕ್ಯವು ಅದನ್ನು! ಮಗುವಿನ ರೋದವನ್ನು ಪಕ್ಕವಾದ್ಯವಾಗಿಸಿ ತಾಯಿಯು ಪಾಡತೊಡಗಿದ ಪರಿಯನ್ನು!
ಯಾಕಳುವೆ ಎಲೆಕಂದ ಬೇಕಾದ್ದು ನಿನಗೆ
ಬೇಬ್ಲೇಡು ಬಗರ‍್ರು ಚಾಕ್ಲೇಟೂಊಊಊ
ಬೇಬ್ಲೇಡು ಬಗರ‍್ರು ಚಾಕ್ಲೇಟು ಚಿಪ್ಸನು
ನೀ ಕೇಳಿದಾಗ ಕೊಡುವೇನೂಊಊಊಊ
ಎಂದು ಅವಳು ಹಾಡಲಾರಂಭಿಸಿದಾಗ ಹಿಟ್ಲರ್‌ನ ಕಾನ್ಸೆಂಟ್ರೇಷನ್ ಕ್ಯಾಂಪಿನಲ್ಲೇ ಇದ್ದಂತಹ ಅನುಭವವಾಗುತ್ತಿತ್ತು. ಹೈ ಸ್ಪೀಡ್ ಗರಗಸದ ಜೊತೆಗೆ ರಬ್ಬರ್ ಸಡಿಲವಾದ ಕಾರಣ ನೀರುಗುಳುತ್ತಾ ಶಿಳ್ಳೆ ಹೊಡೆಯುವ ಕುಕ್ಕರ್‌ನ ಸದ್ದು ಮಿಳಿತವಾಗುವುದನ್ನು ಊಹಿಸಿಕೊಳ್ಳಿ. ನಾನು ಊಹಿಸಬೇಕಾಗಿರಲಿಲ್ಲ!
ಅತ್ತರೇ ಅಳಲವ್ವ ಈ ಕೂಸು ನನಗಿರಲಿ
ಕೆಟ್ಟರೇ ಕೆಡಲಿ ಮನೆಗೆಲಸ
ಎಂದು ಮುಂದುವರೆಸುತ್ತಿದ ಆ ಮಾತೆ ಬಂದಿದ್ದದ್ದೇ ಬೇರೆ ಮನೆಗಾದ್ದರಿಂದ ಅಲ್ಲಿ ಕೆಡಲು ಆಕೆಗೆ ಯಾವ ಕೆಲಸವೂ ಇರಲಿಲ್ಲ. ಆದರೆ ಬೇರೆಯ ಮನೆಗಳಲ್ಲಿ? ‘ಕೆಟ್ಟರೇ ಕೆಡಲಿ ಮನೆಗೆಲಸ’ ಎಂದಾಗ ಯಾರ ಮನೆಯ ಕೆಲಸ’ ಎಂದೇನೂ ಹೇಳಿರಲಿಲ್ಲವಲ್ಲ! ನಮ್ಮ ಮನೆಯಲ್ಲಿ ವರ್ಕ್ ಫ್ರಂ ಹೋಂ’ ಮಾಡುತ್ತಿದ್ದ ಮಕ್ಕಳ ಕೆಲಸ ಅಷ್ಟೂ ಕೆಟ್ಟಿದ್ದಂತೂ ದಿಟ. ಕೂಸಿನ ಕರ್ಕಶತೆಯು ಮಗಳು ಹಾಕಿಕೊಂಡಿದ್ದ ಇಯರ್‌ಫೋನಿನ ಸಂದಿಗೆ ರಭಸದಿಂದ ನುಗ್ಗಿ ಅವಳ ಆಲಿಸುವಿಕೆಗೆ ಭಂಗ ತಂದ ಕಾರಣ ಬಾಸ್ ಕೇಳಿದ್ದೇನೋಇವಳು ಉತ್ತರಿಸಿದ್ದೇನೋ ಎಂಬ ಪ್ರಸಂಗಗಳು ಆಗಾಗ್ಗೆ ನಡೆದು, ‘ರಿಮಾರ್ಕೆಬಲ್’ ಎನ್ನಿಸಿಕೊಳ್ಳುತ್ತಿದ್ದವಳು ರಿಮಾರ್ಕ್ಸ್’ ಪಡೆಯುವ ಮಟ್ಟ ತಲುಪಿದಾಗ ಈ ಕ್ಯಾಕೋಫೋನಿಯಿಂದ ದೂರವಿರಲು ಕ್ವಾರಂಟೈನೇ ವಾಸಿ. ಕುಡ್ ಯೂ ಪ್ಲೀಸ್ ಅರೇಂಜ್ ಒನ್ ಆಫೀಸ್ ಕ್ವಾರಂಟೈನ್ ಫಾರ್ ಮಿ?’ ಎಂದು ಕೇಳುವ ಮಟ್ಟಕ್ಕೆ ರಂಪಾಟ ಹಬ್ಬಿಸಿತ್ತು ಆ ಲಿಟಲ್ ಡೆವಿಲ್. ಕೆಲವೊಮ್ಮೆ ಮಗು ನಿದ್ರಿಸಿದಾಗ ನಾವು ನೆಮ್ಮದಿಯ ಉಸಿರು ಬಿಡುವುದನ್ನು ಸಹಿಸದ ಆ ಅಮ್ಮ ಹಾಡಿನ ರಿಹರ್ಸಲ್‌ಗೆ ತೊಡಗುತ್ತಿದ್ದಳು. ನನ್ನಾಕೆ ಕುಕ್ಕರ್ ಕೂಗಿತೆಂದು ಅಡುಗೆಮನೆಗೆ ಎಡತಾಕಿದಾಗಲೇ ಅದು ಆಕೆಯ ಹಾಡು ಎಂದು ತಿಳಿಯುತ್ತಿದ್ದದ್ದು.
ಒಂದು ದಿನ ಧೈರ್ಯವಹಿಸಿ ಆ ಮಾತೆಯ ಬಳಿ ಸಾಗಿ ಮಗು ಯಾಕಷ್ಟೊಂದು ಅಳತ್ತೆ?’ ಎಂದೆ. ಮಕ್ಕಳು ಅತ್ತರೆ ಲಂಗ್ಸ್ ಸ್ಟ್ರಾಂಗ್ ಆಗತ್ತಂತೆ ಅಂಕಲ್. ಈಗ ಕೋವಿಡ್ ಇದೆ. ಮುಂದೆ ಇನ್ನೇನೇನೋ... ಆದಷ್ಟೂ ಲಂಗ್ಸ್ ಸ್ಟ್ರಾಂಗ್ ಆಗಲಿ ಅಂತ ಆಗಾಗ್ಗೆ ಮಗೂನ ಚುವುಟ್ತೀನಿ’ ಎಂದಳಾಕೆ.
ಮತ್ತೆ ಜೋಗುಳ?’
ನನಗೆ ನಿದ್ರೆ ಮಾಡಬೇಕು ಅನ್ನಿಸಿದಾಗ ಜೋಗುಳ ಹಾಡ್ತೀನಿ. ಮೊದಲಿನಿಂದಲೂ ನನ್ನ ಹಾಡಿಗೆ ನನಗೇ ನಿದ್ರೆ ಬಂದ್ಬಿಡತ್ತೆ’ ನುಡಿದಳಾ ಮಾತೆ.
ಈಗ ಮತ್ತೊಂದು ಸುದ್ದಿ ಅಪ್ಪಳಿಸಿದೆ. ಆ ಮಗುವಿಗೆ ಒಂದು ತಮ್ಮ ಇದೆಯಂತೆ. ಅದರ ಮುಂದೆ ಇದರ ಧ್ವನಿ ವೀಣೆಯಂತೆ. ಸಧ್ಯದಲ್ಲಿ ಜೋಡಿನಗಾರಿ ಯೋಗ ಎಂದು ನನ್ನ ವಾರಭವಿಷ್ಯ ನುಡಿದಿದೆ. ಅಕಟಕಟಾ.... ಡಬ್ಬಲ್ ಅಕಟಕಟಾ.....!